ಪಿಟ್, ವಿಲಿಯಂ 1 -
ಹಿರಿಯ ಪಿಟ್. ಚ್ಯಾಟಾಮಿನ ಮೊದಲನೆಯ ಆರ್ಲ್. 1708-1778. ಇಂಗ್ಲಿಷ್ ರಾಜನೀತಿಜ್ಞ. ಥಾಮಸ್ ಪಿಟ್ಟನ (1653-1726) ಮೊಮ್ಮಗ. 1735 ರಲ್ಲಿ ಪಾರ್ಲಿಮೆಂಟನ್ನು ಪ್ರವೇಶಿಸಿ ತನ್ನ ವಾಗ್ಮಿತೆಯಿಂದ ಕಾಮನ್ಸ್ ಸಭೆಯ ಮೇಲೆ ವಿಶೇಷ ಪ್ರಭಾವ ಬೀರಿದ. ಎರಡನೆಯ ಜಾರ್ಜ್‍ನೊಂದಿಗೆ ಜಗಳದಲ್ಲಿ ವೇಲ್ಸ್ ರಾಜಕುಮಾರನಿಗೆ ಬೆಂಬಲ ನೀಡಿದ್ದಕ್ಕಾಗಿ ಹಾಗೂ ಜಾರ್ಜನನ್ನು ವಿಡಂಬಿಸಿದ್ದಕ್ಕಾಗಿ ಸೈನ್ಯದಿಂದ ವಜಾ ಮಾಡಲ್ಪಟ್ಟ. 1746 ರಲ್ಲಿ ಪೇ ಮಾಸ್ಟರ್ ಮತು ಪ್ರಿವಿ ಕೌನ್ಸಿಲರ್ ಆದ. ಸರ್ಕಾರದ ವಿದೇಶಾಂಗ ನೀತಿಯನ್ನು ವಿರೋಧಿಸಿದ್ದಕ್ಕಾಗಿ ಅವನು 1755 ರಲ್ಲಿ ಆ ಸ್ಥಾನವನ್ನು ಕಳೆದುಕೊಂಡ. ಆದರೆ 1756 ರಲ್ಲಿ 2 ನೆಯ ಜಾರ್ಜ್ ಅವನನ್ನು ಆಹ್ವಾನಿಸಿ ವಿದೇಶಾಂಗ ಸಚಿವನಾಗಿ ಮಾಡಬೇಕಾಯಿತು. ಅವನು ಕಾಮನ್ಸ್ ಸಭೆಯ ನಾಯಕನೂ ಆದ. ವಸ್ತುತಃ ಅವನು ಪ್ರಧಾನಿಯೇ ಆಗಿದ್ದ. 1757 ರಲ್ಲಿ ಅವನನ್ನು ವಜಾ ಮಾಡಲಾಯಿತಾದರೂ ಮತ್ತೆ ಕರೆದು ವಿದೇಶಾಂಗ ಮತ್ತು ಸೈನಿಕ ವ್ಯವಹಾರಗಳಲ್ಲಿ ಅವನಿಗೆ ಸಂಪೂರ್ಣ ಅಧಿಕಾರ ನೀಡಬೇಕಾಯಿತು. ಆಗ ಫ್ರೆಂಚರೊಂದಿಗೆ ನಡೆಯುತ್ತಿದ್ದ ಯುದ್ಧವನ್ನು ಅವನು ಬಲು ಸಮರ್ಥವಾಗಿ ನಿರ್ವಹಿಸಿದ. ಭಾರತ, ಆಫ್ರಿಕ, ಕೆನಡಾಗಳಲ್ಲೂ, ಸಾಗರದಲ್ಲೂ ಅವರು ಸೋಲನ್ನನುಭವಿಸಿದರೂ ಸ್ಪೇನಿನ ಮೇಲೆ ಯುದ್ಧ ಸಾರಬೇಕೆಂಬ ಅವನ ಸಲಹೆಗೆ ಸಂಪುಟದ ಬಹುಮತದ ಬೆಂಬಲ ದೊರಕಲಿಲ್ಲವಾದ್ದರಿಂದ ಪಿಟ್ 1761 ರಲ್ಲಿ ರಾಜೀನಾಮೆ ಕೊಡಬೇಕಾಯಿತು. ಅಮೆರಿಕನ್ ನೆಲಸಿಗರ ಮೇಲೆ ತೆರಿಗೆಯನ್ನು ಇವನು ವಿರೋಧಿಸುತ್ತಲೇ ಇದ್ದ. 1766 ರಲ್ಲಿ ಸಂಪುಟದಲ್ಲಿ ಪ್ರಿವಿಸೀಲ್ ಅಧಿಕಾರವನ್ನು ಸ್ವೀಕರಿಸಿದ. ಅವನ ಆರೋಗ್ಯ ಕೆಟ್ಟಿತ್ತಾದ್ದರಿಂದ ಅವನು ಅದಕ್ಕಿಂತ ಹೆಚ್ಚಿನ ಅಧಿಕಾರ ವಹಿಸಲಿಲ್ಲ. ಕೊನೆಗೆ ಅನಾರೋಗ್ಯದ ಕಾರಣಕ್ಕಾಗಿ 1768 ರಲ್ಲಿ ರಾಜೀನಾಮೆ ನೀಡಿದ. ಏನೇ ಬೆಲೆಯಾದರೂ ಕೊಟ್ಟು ಶಾಂತಿ ಗಳಿಸಬೇಕೆಂಬ, ಅಮೆರಿಕದಿಂದ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂಬ ಮಸೂದೆಯನ್ನು ವಿರೋಧಿಸಿ ಲಾಡ್ರ್ಸ್ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದು ತೀರಿಕೊಂಡ.								(ಎಸ್.ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ